ಬಾ ಮತ್ತೆ ಬೇಗ

ನಿಮ್ಮ ಟಿಪ್ಪಣಿ ಬರೆಯಿರಿ

ಏನೋ ಕಳೆದುಹೋಗುತಿದೆ
ಇಷ್ಟು ಹೊತ್ತು ಒಟ್ಟಿಗಿದ್ದು
ಹಾಗೆ ದೂರಕೆ ಸರಿಯುತಿದೆ

ನೀ ಜೊತೆಗಿರಲು ಎಂಥಾ ಉಲ್ಲಾಸ
ದಿನವಿಡೀ ಬರೀ ಮೋಜು, ಸಂತೋಷ
ಹೋಗುವುದು ಅನಿವಾರ್ಯ, ಅದ ನಾ ಬಲ್ಲೆ
ಹೆಚ್ಚು ಹೊತ್ತು ಕಾಯಿಸಬೇಡ, ಓ ನನ್ನ ನಲ್ಲೆ

ರವಿವಾರದ ರವಿಯೊಡನೆ ನೀ ಕರಗಿ ಹೋಗಿರುವೆ
ಬಾ ಮತ್ತೆ ಬೇಗ , ಓ ನನ್ನ ವೀಕೆಂಡು
ನೀ ಬರುವ ದಾರಿಯ ಕಾದಿರುವೆ..

– ಇಂತಿ ನಿನ್ನ ಪ್ರೀತಿಯ

ವೀಕೆಂಡ್ ಜೀವಿ

ಹೊಸ ವರುಷ -ಹರುಷ

ನಿಮ್ಮ ಟಿಪ್ಪಣಿ ಬರೆಯಿರಿ

ಇರುಳು ಸರಿದು ಹೊಸ ಸೂರ್ಯ
ಹುಟ್ಟುವ ಹೊತ್ತು
ಮೂಡಣದ ತುಂಬಾ ಹೊಂಬೆಳಕ
ಓಕುಳಿಯ ಎರಚಿ
ಇಳೆಗೆ ತಬ್ಬಿದಾ
ಕತ್ತಲ ಮಬ್ಬನ್ನು ಸರಿಸಿ
ಬಂದಿದೆ ನೋಡ ಹೊಸ ವರುಷ
ಎರಡು ಸಾವಿರದ ಇಪ್ಪತ್ತು
ಹೊತ್ತು ತಂದಿದೆ ಅಮಿತ ಹರುಷ
ಎಲ್ಲೆಲ್ಲೂ ಸಂಭ್ರಮದ ಗೈರತ್ತು

ಕನಸ ಹೆಗಲೇರಿ ಓಡುವ ಜೀವನ
ದೂರ ತೀರ ಯಾನ
ನಾವು – ನೀವುಗಳು
ಆಡಿಸುವಾತನ ಕೈಯ ಗೊಂಬೆಗಳು
ನಾಳೆಯ ಕಂಡವರ್ಯಾರಣ್ಣಾ

ಕಳೆದು ಹೋದ ನೆನ್ನೆಯ,ಕಾಣದ ನಾಳೆಯ
ಹುಡುಕಿದರೆ ಫಲವಿಲ್ಲಾ
ಈಗ-ಇಂದುಗಳ ಅರಿತು ಜೀವಿಸು
ಜೀವನವು ಸವಿಬೆಲ್ಲ

ಹೊಸ ವರುಷದಿ ಬಾಳು ಬೆಳಗಾಗಲಿ
ಸದಾ ಹರಿವ ಹರುಷದ ಚಿಲುಮೆ ಮೂಡಲಿ
ಮನದ ಗವಿಯಲ್ಲಿ
ನವಚೇತನದ ಬೆಳಕು ಹೊಮ್ಮಲಿ
ಒಲುಮೆಯ ಹೊಸ ಸೆಳೆಯು
ಚಿಗುರೊಡೆಯಲಿ ಬಾಳಲಿ

ಅಮ್ಮ

ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ – ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ “ಅಮ್ಮ” ಎಂದರೆ ಸಾಕೆ..

ನುಡಿ ನಮನ

ನಿಮ್ಮ ಟಿಪ್ಪಣಿ ಬರೆಯಿರಿ

ಬೆಳಗಲಿ ಮನೆ-ಮನಗಳಲಿ
ಕನ್ನಡದ ಜ್ಯೋತಿ
ಹರಡಲಿ,ಸಾಗಲಿ
ಡಿಕ್ದಿಗಂತಗಳ ದಾಟಿ

ಸುರ ವಾಣಿ ಇದು
ಮನಕೆ ತಂಪು, ಕೇಳಲು ಇಂಪು
ನಭವೆಲ್ಲಾ ಆವರಿಸಲಿ
ಕನ್ನಡ ಕಸ್ತೂರಿಯ ಕಂಪು

ಅನ್ಯ ಭಾಷೆಗಳೂ ಇರಲಿ
ಸೋದರರ ರೀತಿ
ಕರುನಾಡ ಮೇಲೆ ಇರಲಿ
ಅಪರಿಮಿತ ಪ್ರೀತಿ

ಕನ್ನಡ ಹಬ್ಬದಂದು
ಮನದ ಆಸೆ ಈ ಕವನ
ಕರುನಾಡ ತಾಯಿಯ ಪಾದಕೆ
ಕಿರಿಯನ ಪುಟ್ಟ ನುಡಿ ನಮನ