ಅಮ್ಮ

ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ – ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ “ಅಮ್ಮ” ಎಂದರೆ ಸಾಕೆ..

ನುಡಿ ನಮನ

ನಿಮ್ಮ ಟಿಪ್ಪಣಿ ಬರೆಯಿರಿ

ಬೆಳಗಲಿ ಮನೆ-ಮನಗಳಲಿ
ಕನ್ನಡದ ಜ್ಯೋತಿ
ಹರಡಲಿ,ಸಾಗಲಿ
ಡಿಕ್ದಿಗಂತಗಳ ದಾಟಿ

ಸುರ ವಾಣಿ ಇದು
ಮನಕೆ ತಂಪು, ಕೇಳಲು ಇಂಪು
ನಭವೆಲ್ಲಾ ಆವರಿಸಲಿ
ಕನ್ನಡ ಕಸ್ತೂರಿಯ ಕಂಪು

ಅನ್ಯ ಭಾಷೆಗಳೂ ಇರಲಿ
ಸೋದರರ ರೀತಿ
ಕರುನಾಡ ಮೇಲೆ ಇರಲಿ
ಅಪರಿಮಿತ ಪ್ರೀತಿ

ಕನ್ನಡ ಹಬ್ಬದಂದು
ಮನದ ಆಸೆ ಈ ಕವನ
ಕರುನಾಡ ತಾಯಿಯ ಪಾದಕೆ
ಕಿರಿಯನ ಪುಟ್ಟ ನುಡಿ ನಮನ