ಅಮ್ಮ

ನಿಮ್ಮ ಟಿಪ್ಪಣಿ ಬರೆಯಿರಿ

ನನ್ನ ಮೊದಲ ತೊದಲ ಮಾತು ನಿನ್ನ ಹೆಸರೇ ತಾನೇ
ಪುಟ್ಟ ಅಂಬೆಗಾಲನಿಟ್ಟು ನಿನ್ನೆಡೆಗೆ ಕೈಚಾಚಿ ಬರುವೆನೆ
ಜಾರಿ ಬಿದ್ದಾಗಲೆಲ್ಲ ನನ್ನ ಕೈ ಹಿಡಿದು ನಡೆಸಿದೆ
ಹಿಡಿ ಮಣ್ಣಿನಂತೆ ಇದ್ದ ಎನ್ನ ಶಿಲ್ಪವಾಗಿ ಮಾಡಿದೆ

ಜೀವನ ಪಯಣದಿ ನಾ ಸಾಗಲು ಮುಂದೆ
ನೀ ನೆರಳಾಗಿ ಬಂದೆ ಸದಾ ಬೆನ್ನ ಹಿಂದೆ
ಕಲ್ಲು ಮುಳ್ಳುಗಳ ದೂರ ಸರಿಸುತಾ ಬಂದೆ
ದಾರಿ ದೀವಿಗೆಯಾಗಿ ಬೆಳಕ ಹರಿಸುತ ನಿಂದೆ

ತ್ಯಾಗ,ಪ್ರೀತಿ ಮಮಕಾರಕೆ ನೀನೆ ಮೂರ್ತ ರೂಪ
ನಿನ್ನ ಪ್ರೇಮ ಸಾಗರದ ನಡುವೆ ನಾನೊಂದು ಸ್ವಾರ್ಥಿ ದ್ವೀಪ
ನೋವನುಂಡು ನಲಿವ ಉಣಿಸೋ ನಿನ್ನ ಪ್ರೀತಿ ಕಡಲು
ಇಂದ್ರನೂ ಹುಡುಕಿ ಹೋದ ಸ್ವರ್ಗ – ತಾಯಿ ಮಡಿಲು

ಜಗದಿ ಒಲವ ಬಣ್ಣಿಸಲು ಕವಿಗಳು ನೂರು ಬೇಕೆ
ಎರಡಕ್ಷರದ ಮಹಾಕಾವ್ಯ “ಅಮ್ಮ” ಎಂದರೆ ಸಾಕೆ..

ನುಡಿ ನಮನ

ನಿಮ್ಮ ಟಿಪ್ಪಣಿ ಬರೆಯಿರಿ

ಬೆಳಗಲಿ ಮನೆ-ಮನಗಳಲಿ
ಕನ್ನಡದ ಜ್ಯೋತಿ
ಹರಡಲಿ,ಸಾಗಲಿ
ಡಿಕ್ದಿಗಂತಗಳ ದಾಟಿ

ಸುರ ವಾಣಿ ಇದು
ಮನಕೆ ತಂಪು, ಕೇಳಲು ಇಂಪು
ನಭವೆಲ್ಲಾ ಆವರಿಸಲಿ
ಕನ್ನಡ ಕಸ್ತೂರಿಯ ಕಂಪು

ಅನ್ಯ ಭಾಷೆಗಳೂ ಇರಲಿ
ಸೋದರರ ರೀತಿ
ಕರುನಾಡ ಮೇಲೆ ಇರಲಿ
ಅಪರಿಮಿತ ಪ್ರೀತಿ

ಕನ್ನಡ ಹಬ್ಬದಂದು
ಮನದ ಆಸೆ ಈ ಕವನ
ಕರುನಾಡ ತಾಯಿಯ ಪಾದಕೆ
ಕಿರಿಯನ ಪುಟ್ಟ ನುಡಿ ನಮನ

Some-ವೇದನೆ

2 ಟಿಪ್ಪಣಿಗಳು

ಮನದ ಕನ್ನಡಿಯಲ್ಲಿ ನಿನ್ನದೇ ಬಿಂಬ
ನೀನಿಟ್ಟ ರಂಗವಲ್ಲಿ ಅಂಗಳದ ತುಂಬಾ
ಒಡೆದ ಮನದಲ್ಲೂ ನಿನ್ನದೇ ನೂರು ಚಿತ್ತಾರ
ತೊರೆದುಹೋದ ಮನೆ, ಕದಡಿದ ಬಣ್ಣಗಳ ಸಾಗರ

ತಂತಿ ಹರಿದ ವೀಣೆಯಲ್ಲಿ ಸುಸ್ವರವು ಬರದು
ನೀನಿಲ್ಲದೆ ಇನ್ನೇನಿದೆ, ಹಾಳು ಬಾಳೇ ಬರುಡು
ನನ್ನ ನಾ ಮರೆತಂತೆ ನಿನ್ನ ಮರೆಯದಾದೆನು
ನಿನ್ನದೇ ನೆನಪಲ್ಲಿ ಖಾಯಂ ಬಂಧಿ ನಾನು

ನೀ ಹೋದ ದಾರಿಯನ್ನೇ ಎದುರು ನೋಡಿ ಕೂತಿರುವೆ
ಆಶಾವಾದಿ ಹಾಳು ಮನಸು
ನನ್ನೊಲುಮೆ ಅರಿವಾಗಿ ಹಿಂತಿರುಗಿ ನೋಡುವೆಯೋ
ಆಸೆಯಿಂದ ಕಂಗಳು ಕಂಡಿದೆ ಕನಸು

ವೇದನೆ

ನಿಮ್ಮ ಟಿಪ್ಪಣಿ ಬರೆಯಿರಿ

ಕಣ್ಣುಗಳು ಮಾತಾಡಿದೆ ಮೌನದ ಭಾಷೆ
ಹೃದಯದಲಿ ಉಳಿದುಹೋಗಿದೆ ನಿನ್ನದೇ ಆಸೆ
ಒಲವಿನ ಕಡಲಲ್ಲಿ ನೂರಾರು ಸವಿನೆನಪಿನ ಕಂತೆ
ಪ್ರೀತಿ ಮಾಯವಾಯಿತೆ ನೀರ ಮೇಲಿನ ಗುಳ್ಳೆಯಂತೆ
ವಿರಹದಲಿ ಹೋಳಾಗಿದೆ ಕನಸಿನ ನೌಕೆ
ನೀ ಜೊತೆಗಿರದ ಬಾಳ ಪಯಣವು ಬದುಕೇ??

ಮನದ ಕಡಲ ಅಪ್ಪಳಿಸುತಿವೆ
ನೆನಪಿನ ಅಲೆಗಳು ಸತತ
ಹೇಳತೀರದ ಸಿಹಿಯಾದ ವೇದನೆ
ಒಳಗೊಳಗೆ ಒಡಲ ಕೊರೆತ

ಕೇಳದೆ ಮನದನ್ನೆ ನಿನಗೆ?
ಎನ್ನ ಮನದಾಳದ ತುಡಿತ
ಹುಚ್ಚು ಪ್ರೇಮಿಯ ಕೊನೆಯುಸಿರಲ್ಲೂ
ನಿನ್ನದೇ ಹೆಸರಿನ ಎದೆಬಡಿತ

ಅವಳು

ನಿಮ್ಮ ಟಿಪ್ಪಣಿ ಬರೆಯಿರಿ

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ
ಮಿಂಚಿನ ಸಂಚಾರ ಅವ ಕುಳಿತ ಮನದಲ್ಲಿ
ವರ್ಣಿಸಲಿ ಹೇಗೆ ಅವಳ ಏಳೆಂಟು ಪದಗಳಲಿ??

ಅವಳ ಮೊಗವ ನೋಡಿ ಮೊಗ್ಗಾಯ್ತು ಮಲ್ಲಿಗೆ
ಹಾಡುವ ಬಾನಾಡಿ ಮತ್ಸರದಿ ಓಡಿತು ಎಲ್ಲಿಗೆ
ಅಲ್ಲೇ ದೂರದಿ ನಿಂತು ಬೀರಿದಳು ಹೂನಗೆ
ಇಲ್ಲೇ ಇದ್ದ ಜೀವ ಹಾರಿತು ಮೆಲ್ಲಗೆ

ಮನದ ಮಾರ್ದನಿಯಂತೆ ಮುದ್ದಿನ ಮಾತು ಪೇಲ್ವ
ಕುಸುಮ ಕೋಮಲೆ ನನ್ನವಳು
ಜೀವನ ರಸಕಾವ್ಯಕೆ ಮುತ್ತಿನ ಮುನ್ನುಡಿ ಬರೆದು
ಒಲವ ಸಹಿಯನು ಇಟ್ಟವಳು

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ

Older Entries Newer Entries