ವೇದನೆ

ನಿಮ್ಮ ಟಿಪ್ಪಣಿ ಬರೆಯಿರಿ

ಕಣ್ಣುಗಳು ಮಾತಾಡಿದೆ ಮೌನದ ಭಾಷೆ
ಹೃದಯದಲಿ ಉಳಿದುಹೋಗಿದೆ ನಿನ್ನದೇ ಆಸೆ
ಒಲವಿನ ಕಡಲಲ್ಲಿ ನೂರಾರು ಸವಿನೆನಪಿನ ಕಂತೆ
ಪ್ರೀತಿ ಮಾಯವಾಯಿತೆ ನೀರ ಮೇಲಿನ ಗುಳ್ಳೆಯಂತೆ
ವಿರಹದಲಿ ಹೋಳಾಗಿದೆ ಕನಸಿನ ನೌಕೆ
ನೀ ಜೊತೆಗಿರದ ಬಾಳ ಪಯಣವು ಬದುಕೇ??

ಮನದ ಕಡಲ ಅಪ್ಪಳಿಸುತಿವೆ
ನೆನಪಿನ ಅಲೆಗಳು ಸತತ
ಹೇಳತೀರದ ಸಿಹಿಯಾದ ವೇದನೆ
ಒಳಗೊಳಗೆ ಒಡಲ ಕೊರೆತ

ಕೇಳದೆ ಮನದನ್ನೆ ನಿನಗೆ?
ಎನ್ನ ಮನದಾಳದ ತುಡಿತ
ಹುಚ್ಚು ಪ್ರೇಮಿಯ ಕೊನೆಯುಸಿರಲ್ಲೂ
ನಿನ್ನದೇ ಹೆಸರಿನ ಎದೆಬಡಿತ

ಅವಳು

ನಿಮ್ಮ ಟಿಪ್ಪಣಿ ಬರೆಯಿರಿ

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ
ಮಿಂಚಿನ ಸಂಚಾರ ಅವ ಕುಳಿತ ಮನದಲ್ಲಿ
ವರ್ಣಿಸಲಿ ಹೇಗೆ ಅವಳ ಏಳೆಂಟು ಪದಗಳಲಿ??

ಅವಳ ಮೊಗವ ನೋಡಿ ಮೊಗ್ಗಾಯ್ತು ಮಲ್ಲಿಗೆ
ಹಾಡುವ ಬಾನಾಡಿ ಮತ್ಸರದಿ ಓಡಿತು ಎಲ್ಲಿಗೆ
ಅಲ್ಲೇ ದೂರದಿ ನಿಂತು ಬೀರಿದಳು ಹೂನಗೆ
ಇಲ್ಲೇ ಇದ್ದ ಜೀವ ಹಾರಿತು ಮೆಲ್ಲಗೆ

ಮನದ ಮಾರ್ದನಿಯಂತೆ ಮುದ್ದಿನ ಮಾತು ಪೇಲ್ವ
ಕುಸುಮ ಕೋಮಲೆ ನನ್ನವಳು
ಜೀವನ ರಸಕಾವ್ಯಕೆ ಮುತ್ತಿನ ಮುನ್ನುಡಿ ಬರೆದು
ಒಲವ ಸಹಿಯನು ಇಟ್ಟವಳು

ಈ ಪರಿಯ ಸೊಬಗ ಏನೆಂದು ಬಣ್ಣಿಸಲಿ
ಸಾಟಿ ಯಾರುಂಟು ಈ ಸೊಗಸಿಗೆ ಲೋಕದಲಿ

ಕಾತುರ

ನಿಮ್ಮ ಟಿಪ್ಪಣಿ ಬರೆಯಿರಿ

ಬಾನಿನ ಮೋಡದ ತೆರೆಯ
ಹಿಂದೆಲ್ಲೋ ನಿಂತಿರುವೆ
ತಿಂಗಳ ಬೆಳಕಿಗೆ ನಿನ್ನ
ತಂಪನ್ನು ತುಂಬಿರುವೆ

ನದಿಯ ಬಳುಕಿನ ಓಟಕೆ
ನಾದವ ನೀ ನುಡಿಸಿ
ಎಲ್ಲಿ ಅವಿತೆ ಸಖಿಯೆ
ಕರೆದಿಹೆನು ಕೈಬೀಸಿ

ತೆರೆಮರೆಯ ಆಟವ ಮುಗಿಸು
ಬಾ ಬೇಗ ಓ ಒಲವೇ
ಹೃದಯದ ಬಾಗಿಲ ತೆರೆದು
ನಿನಗಾಗಿ ಕಾದಿರುವೆ…

ತೊದಲು ಮಾತು

ನಿಮ್ಮ ಟಿಪ್ಪಣಿ ಬರೆಯಿರಿ

ಹುಚ್ಚು ಮನಸಿನ ಹತ್ತು ಮುಖಗಳಿಗೆ ಆಕಾರ ಕೊಡುವ ಪ್ರಯತ್ನ ಈ ಪುಟಗಳು. ಮನಸಿಗೆ ತೋಚಿದ ಸಾಲುಗಳಿಗೆ ಇಲ್ಲಿ ಲೇಖನಿಯ ಲೇಪ ಕೊಟ್ಟಿದ್ದೀನಿ. ಈ ತೊದಲು ಮಾತುಗಳು ಇಷ್ಟವಾದರೆ ನಿಮ್ಮ ಅನಿಸಿಕೆ ತಿಳಿಸಿ, ಇಲ್ಲದಿದ್ದರೂ ತಿಳಿಸಿ..

Newer Entries